ಆರ್ಡ್‍ವುಲ್ಫ್
	
ಒಂದು ಸಸ್ತನಿ. ದಕ್ಷಿಣ ಮತ್ತು ಪೂರ್ವ ಆಫ್ರಿಕ ದೇಶಗಳಲ್ಲಿ ವಾಸಿಸುತ್ತದೆ. ಆಕಾರದಲ್ಲಿ ತೋಳದಷ್ಟು ದೊಡ್ಡದು. ಆದರೆ ಹಿಂಗಾಲುಗಳು ಎತ್ತರವಾಗಿರುವುದರಿಂದ ತೋಳಕ್ಕಿಂತ ಎತ್ತರವಾಗಿ ನಿಲ್ಲುತ್ತದೆ. 
	
ಅದರ ಕೂದಲು ಹಳದಿ ಅಥವಾ ಕೆಂಪುಮಿಶ್ರ ಕಂದುಬಣ್ಣದಿಂದ ಕೂಡಿದ್ದು, ಒರಟಾಗಿ ಉಣ್ಣೆಯಂತಿರುತ್ತದೆ. ಎರಡು ಪಕ್ಕದಲ್ಲೂ ಆರು ಪಟ್ಟೆಗಳಿವೆ. ಬಾಲ ಸುಮಾರು ಉದ್ದವಾಗಿ ದಪ್ಪವಾಗಿರುತ್ತದೆ. ಕತ್ತಿನ  ಮತ್ತು ಬೆನ್ನಿನ ಮೇಲೆ ಕೇಸರಿ ಕೂದಲು ಇದೆ. ನೋಡುವುದಕ್ಕೆ ಚಿಕ್ಕ ಕತ್ತೆ ಕಿರುಬದಂತೆ ಕಾಣುತ್ತದೆ. ಆದರೆ ಕತ್ತೆ ಕಿರುಬಕ್ಕಿಂತ ಇದರ ದವಡೆಗಳು ಬಲಹೀನವಾಗಿವೆ; ಮುಸುಡಿ ಮೊನಚಾಗಿದೆ; ಕಿವಿಗಳು ಇನ್ನೂ ಉದ್ದವಾಗಿವೆ, ಇದರ ಮುಖ್ಯ ಆಹಾರ ಗೆದ್ದಲು ಹುಳು, ನೊಣಗಳು, ಮರಿಹುಳುಗಳು ಮತ್ತು ಹಣ್ಣು. ನೆಲದಲ್ಲಿ ಹಳ್ಳತೋಡಿ ಅದರಲ್ಲಿ ವಾಸಿಸುತ್ತದೆ. ಇತರ ಹಳ್ಳವಾಸಿಗಳಂತೆ ಆರ್ಡವುಲ್ಫ್ ತುಂಬ ಭಯಸ್ಥ ಮತ್ತು ಹೇಡಿಯಾದ ಪ್ರಾಣಿ. ರಾತ್ರಿ ಸಂಚಾರಿಯಾದುದರಿಂದ ಇದು ಸಾಧಾರಣವಾಗಿ ಕಣ್ಣಿಗೆ ಬೀಳುವುದಿಲ್ಲ.

(ಎಸ್.ಎನ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ